ಶನಿವಾರ, ಸೆಪ್ಟೆಂಬರ್ 29, 2012

ಹೂ ಬಳ್ಳಿ

ಅಂಗಳದ ತುಂಬಾ ಬಿರಿದ ಹೂವ ಪರಿಮಳ,
ಕಣ್ಣ ತುಂಬುವ ಕಾಮನಬಿಲ್ಲು.
ಅಲ್ಲಿ ಇಲ್ಲಿ ಕಾಣದ ಸತ್ಯ ,
ನಮ್ಮೆದುರ ಸಾಕ್ಷಾತ್ಕಾರ.

ನೆಲ ಬಸಿರ ಬಗೆದು,
ಬಚ್ಚಿಟ್ಟ ಚಿಪ್ಪನೊಡೆದ  ಬೀಜ.
ಸುರಿದ  ಮುಂಗಾರಿಗೆ ,
ನಳನಳಿಸಿ ಚಿಗಿತು,
ಕೇಳದೇ ನನ್ನೆದೆಯಲ್ಲಿ ,
ಪಲ್ಲವಿಸಿತು ಹರಡಿ.

ಹಚ್ಚ ಹಸಿರ  ಚಪ್ಪರ,
ತುಂಬು ನೋಟದ ಸುಖ,
ಪಲ್ಲವದ  ತುದಿಯಲ್ಲಿ,
ನಾಳೆ, ಬಯಸುವಮೊಗ್ಗು.

ಬೆಳಕಿನೊಡೆದ  ಪರಿಯಲ್ಲಿ,
ಮುಂಜಾವದ  ಮಂಜಲ್ಲಿ,
ಕಿರಣದಲ್ಲಿ  ಲಕಲಕಿಸಿತು
ನವಮಂದಾರ.

ಬೇಲಿಯಾಚೆಯ  ಕಣ್ಣು,
ಅತ್ತಿತ್ತ ಸುಳಿದಾಡುವ ಚಿಟ್ಟೆ,
ಮತ್ತೆ  ಝೇoಕರಿಸುವ  ದುಂಬಿಯಾಟ .
ಅರೆಬಿರಿದ ಮುಗುಳೊಳಗಿಂದ,
ಮಕರಂದ ಹೀರುವಾಟ .

ನನ್ನೆದೆಯಲ್ಲಿ ಹಬ್ಬಿ ಹರಡಿಯ ಬಳ್ಳಿ,
ಮನವ   ತುಂಬಿದ  ಹೂವು,
ಸುತ್ತೆಲ್ಲ ಘಮದ ಸೌಂದರ್ಯ ,
ನನ್ನ ಜಗವ ಬೆಳಗುವ ದೀಪ .

ನನ್ನ ಕ್ಷಮಿಸು ಸುಮವೇ,
ನಾಳೆಯಿಂದ, ರಕ್ಷಿಸಲಾರೆ ನಿನ್ನ.
ನನ್ನಂಗಳದ ಹೂವು,
ಮುಂಜಾನೆಯ ಮುದುಡು  ಮುಖವ
ನೋಡಲಾರೆ.

ಕ್ಷಣದ ಬದುಕು,
ದಿನದ ಸೌಂದರ್ಯ,
ಸುತ್ತೆಲ್ಲ ಘಮದ  ನಗು,
ಪಾಠವಾಗಲಿ  ನನಗೆ,
ಜೀವನದಲ್ಲಿ.







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ