ಶನಿವಾರ, ಡಿಸೆಂಬರ್ 22, 2012

ಜಲ ನೆಲ ಮುಗಿಲು

ದುಮ್ಮಿಕ್ಕುವ ಜಲಧಾರೆಯಲ್ಲಿ ನಿಂತು,
ಮುಗಿಲತ್ತ  ದೃಷ್ಟಿಸಿದಾಗ
ಕಣ್ಣ ತುಂಬಾ ಮುಗಿಲ ಮಿಂಚು.
ಅದೋ ಅಲ್ಲಿ ಜ್ವಲಿಸುವ ಸೂರ್ಯ,
ಬಾನೆತ್ತರದ ಅಗ್ನಿ ಬಿಂಬ .
ಸುರಿವ ಕೆಂಡ, ಮತ್ತೆ ಪ್ರಜ್ವಲಿಸುವ
ಸೂರ್ಯಕಾಂತಿ.

ಅಲ್ಲಿಯೇ ನಿಂತು  ಮೊಗೆದು ಕುಡಿದ  ಜಲ
ನನ್ನಾಳದಲ್ಲಿ ಇಂಗಿಹೊಯಿತಲ್ಲ!

ಬಿನ್ನಾಣದ ಸೃಷ್ಟಿ,
ಲಯದ ಸ್ವಪ್ನದ ಕನವರಿಕೆಯಲ್ಲಿ,
ನನ್ನದೆನ್ನದ ಮೋಹದ ಹುಚ್ಚು ಹೊಳೆ ,
ಅಲ್ಲಿಯೇ ಐಕ್ಯವಾಯಿತೆ ಜಲ?

ಬನ್ನಿ ಬಂಗಾರವ ಬೆಳೆಯೋಣ ,
ಬಂಗಾರವನ್ನೇ ಬಿತ್ತೋಣ .
ಜಗದಗಲ ಮುಗಿಲಗಲ ,
ಸರ್ವ ಸಮಷ್ಟಿಯ ಪಾಲಾಗೋಣ.

ಅದೇ ಜಲ ,ನೆಲ,ಮುಗಿಲು,
ಮತ್ತೆಲ್ಲಿಯ ಭ್ರಾಂತಿ?







ಬುಧವಾರ, ಅಕ್ಟೋಬರ್ 31, 2012

ಭೇಟಿ

ಒಂದು ಕ್ಷಣದ  ಭೇಟಿ,
ಒಂದು ಮಂದಹಾಸ ,
ಮುಗುಳುನಗು,
ಮತ್ತೆ ವಿದಾಯ.

ಎಲ್ಲೋ  ಕಂಡ ನೆನಪು
ತಲೆ ತುಂಬಾ ಮರವು,
ಮಧ್ಯದಲ್ಲೆಲ್ಲೋ  ಇಣುಕಿದ
ಮುಖ.

ಅಡಗಿ ಕುಳಿತ ಕೋಗಿಲೆ
ಕುಹೂ ಎಂದ ನೆನಪು.
ಎಂದೋ ಜಾತ್ರೆಯಲ್ಲಿ
ಸರಿದು ಹೋದ ಸುಂದರಿ.

ಮತ್ತೆ ಭೋರೆಂಬ ಮಳೆಯಲ್ಲಿ ,
ಕೊಡೆಯಡಿಯಲ್ಲಿ ಮರೆಯಾದ  ಮುಖ.
ಸಹಪಾಟಿಗಳೆಡೆಯಲ್ಲಿ ಕದ್ದು
ನೋಡಿದ ಕಣ್ಣು.

ಸಂಜೆ ನೋಟದ  ಕೆಂಪು
ದಿಕ್ಕೆಟ್ಟ ಮೋಡಗಳ
ಪಯಣ,
ದಾರಿಯುದ್ದಕ್ಕೂ ಸುರಿದ
ಪಾರಿಜಾತ.

ಅಲ್ಲೇ ಕಂಡ ಕಣ್ಣಿಗೆ,
ಮರೆತ ಮನಸಿಗೆ,
ಒಂದು ಕ್ಷಣದ
ರೋಮಾಂಚನ.

ಮತ್ತೆ ಮೌನ ಬಂಗಾರ .



ಶನಿವಾರ, ಸೆಪ್ಟೆಂಬರ್ 29, 2012

ಹೂ ಬಳ್ಳಿ

ಅಂಗಳದ ತುಂಬಾ ಬಿರಿದ ಹೂವ ಪರಿಮಳ,
ಕಣ್ಣ ತುಂಬುವ ಕಾಮನಬಿಲ್ಲು.
ಅಲ್ಲಿ ಇಲ್ಲಿ ಕಾಣದ ಸತ್ಯ ,
ನಮ್ಮೆದುರ ಸಾಕ್ಷಾತ್ಕಾರ.

ನೆಲ ಬಸಿರ ಬಗೆದು,
ಬಚ್ಚಿಟ್ಟ ಚಿಪ್ಪನೊಡೆದ  ಬೀಜ.
ಸುರಿದ  ಮುಂಗಾರಿಗೆ ,
ನಳನಳಿಸಿ ಚಿಗಿತು,
ಕೇಳದೇ ನನ್ನೆದೆಯಲ್ಲಿ ,
ಪಲ್ಲವಿಸಿತು ಹರಡಿ.

ಹಚ್ಚ ಹಸಿರ  ಚಪ್ಪರ,
ತುಂಬು ನೋಟದ ಸುಖ,
ಪಲ್ಲವದ  ತುದಿಯಲ್ಲಿ,
ನಾಳೆ, ಬಯಸುವಮೊಗ್ಗು.

ಬೆಳಕಿನೊಡೆದ  ಪರಿಯಲ್ಲಿ,
ಮುಂಜಾವದ  ಮಂಜಲ್ಲಿ,
ಕಿರಣದಲ್ಲಿ  ಲಕಲಕಿಸಿತು
ನವಮಂದಾರ.

ಬೇಲಿಯಾಚೆಯ  ಕಣ್ಣು,
ಅತ್ತಿತ್ತ ಸುಳಿದಾಡುವ ಚಿಟ್ಟೆ,
ಮತ್ತೆ  ಝೇoಕರಿಸುವ  ದುಂಬಿಯಾಟ .
ಅರೆಬಿರಿದ ಮುಗುಳೊಳಗಿಂದ,
ಮಕರಂದ ಹೀರುವಾಟ .

ನನ್ನೆದೆಯಲ್ಲಿ ಹಬ್ಬಿ ಹರಡಿಯ ಬಳ್ಳಿ,
ಮನವ   ತುಂಬಿದ  ಹೂವು,
ಸುತ್ತೆಲ್ಲ ಘಮದ ಸೌಂದರ್ಯ ,
ನನ್ನ ಜಗವ ಬೆಳಗುವ ದೀಪ .

ನನ್ನ ಕ್ಷಮಿಸು ಸುಮವೇ,
ನಾಳೆಯಿಂದ, ರಕ್ಷಿಸಲಾರೆ ನಿನ್ನ.
ನನ್ನಂಗಳದ ಹೂವು,
ಮುಂಜಾನೆಯ ಮುದುಡು  ಮುಖವ
ನೋಡಲಾರೆ.

ಕ್ಷಣದ ಬದುಕು,
ದಿನದ ಸೌಂದರ್ಯ,
ಸುತ್ತೆಲ್ಲ ಘಮದ  ನಗು,
ಪಾಠವಾಗಲಿ  ನನಗೆ,
ಜೀವನದಲ್ಲಿ.







ಮಂಗಳವಾರ, ಸೆಪ್ಟೆಂಬರ್ 25, 2012

ನನ್ನೆದೆಯಲ್ಲಿ ತಾವಿಲ್ಲ

ತಾವಿಲ್ಲ ನಿನಗೆ ನನ್ನೆದೆಯಲ್ಲಿ.

ಅಲ್ಲಿ ಇಲ್ಲಿ ಅಂಡೆಲದು
ಬೆಳಂಬೆಳಗು ಕುದ್ದು ಕೊಸರಾಡಿ
ಮತ್ತೆ ಉನ್ಮತ್ತನಂತೆ
ಹರಿದಾಡಿ ಬಂದರೆ,
ತಾವಿಲ್ಲ ನನ್ನದೆಯಲ್ಲಿ.

ಅಲ್ಲಿಯೇ ಮುಗಿದ ದಿನಗಳು
ಅಂದೇ ತೀರಿದ ಬದುಕು,
ಮತ್ತೆಂದು ಉರಿಯದ ಬೆಂಕಿ,
ನನ್ನೆದೆಯಿಂದ ನಿನ್ನೆದೆಗೆ ಸಾಗಿದ
ನೆನಪು,
ಬೇಕಿಲ್ಲ ನನಗೆ,
ನನ್ನದೆಯಲ್ಲಿ ತಾವಿಲ್ಲ.

ಮತ್ತೆ ಮರುಗದ ಕರುಳು,
ಉರಿದರೂ ತಣಿಯದ ದಾಹ,
ಒಂಟಿ ನಕ್ಷತ್ರದ ಬೆಳಕು,
ಬೇಡ ನನ್ನೆದೆಯಲ್ಲಿ ,
ತಾವಿಲ್ಲ ನಿನಗೆ.

ಯಾರ ಎದೆಯಲ್ಲಿ ಸುಖವಾಗಿದ್ದೆ?
ಯಾರ ಮಡಿಲಲ್ಲಿ ಮಲಗಿದ್ದೆ/
ಯಾರ ಭಾವ ನಿನ್ನ  ಸಾಕಿತು?
ಎಂದು ತೀರಿತು ದಿನ?
ಏನೂ ಬೇಕಿಲ್ಲ ನನಗೆ,
ನನ್ನೆದೆಯಲ್ಲಿ ತಾವಿಲ್ಲ.

ಕಣ್ಣಿಗೆ ಕಾಣದ ಲೋಕ,
ಕನಸ ಕಸಿಯುವ ಸುಖ ,
ಅತ್ತು ಸೊರಗಿದ ಗಂಟಲ
ಮಂದ್ರ ಗಾನ,
ಮುದಗೊಳಿಸದೆನ್ನ ,
ಹವಣಿಸದಿರು ಇನ್ನು
ತಾವಿಲ್ಲ ನನ್ನದೆಯಲ್ಲಿ.

ಕೂತುಬಿಡು  ಬೆಂಕಿಯಲ್ಲಿ,
ಮುಳಗಿಬಿಡು ನೀರಿನಲ್ಲಿ,
ಕತ್ತಿಡು   ಬೀಸುವ ಖಡ್ಗದಡಿ
ಮತ್ತೆಂದೂ  ಬರದಿರು
ನನ್ನೆದೆಯಲ್ಲಿ ತಾವಿಲ್ಲ .

ಶುಕ್ರವಾರ, ಸೆಪ್ಟೆಂಬರ್ 7, 2012

ಧ್ಯಾನ

ಧ್ಯಾನ  ಅಂದ ಕೂಡಲೇ ಒಂದು ತರಹದ ಅಲೌಕಿಕತೆ ನಮ್ಮನ್ನು ಆವರಿಸಿಕೊಳ್ಳುತ್ತದೆ.ಈ ಧ್ಯಾನವನ್ನು

ಒಂದು ವಸ್ತು ಇಲ್ಲವೇ ದೇವರಲ್ಲಿ  ತೋರುವ ತಾದ್ಯಾತ್ಮ ಎಂದೇ ಭಾವಿಸುವುದುಂಟು. ಇಲ್ಲಿ

ವಸ್ತುವಿನ ಮೇಲಿನ ಕೇಂದ್ರಿಕೃತ ಮನಸ್ಸು ಅಲ್ಲಿಯೇ ಲೀನವಾಗತಕ್ಕದ್ದು. ಅಂದಾಗ ಒಂದು ಸಂಗತಿಯ

ಅಂತರ್ಗತ ದರ್ಶನ ನಮಗಾಗಬಹುದು.  'ಮನವೆಂಬ ಮರ್ಕಟ ' ಎಲ್ಲಿಯವರೆಗೆ ಸ್ತಿರಗೊಳಿಸಲಾಗುತ್ತದೆ

ಎನ್ನುವುದು ಧ್ಯಾನದ ಸಮಯವನ್ನು ಮತ್ತು  ಅದರ ಆಳವನ್ನು ನಿರ್ಧರಿಸುತ್ತದೆ.  ಏಕಾಂತದಲ್ಲಿ ಕುಳಿತ ವ್ಯಕ್ತಿ

ಧ್ಯಾನಾಸಕ್ತನಾಗಿದ್ದಾನೆ  ಎಂದು ನಿರ್ಣಯಿಸುವುದು ಸಾಧುವಾಗಲಾರದು. ಯೋಗಾಭ್ಯಾಸದಲ್ಲಿ  ಧ್ಯಾನಕ್ಕೆ

ಅತ್ಯುನ್ನತ  ಸ್ಥಾನವಿದೆ. ಧ್ಯಾನದಿಂದ ವ್ಯಕ್ತಿಯೊಬ್ಬ ಅಸಾಮಾನ್ಯ ಶಕ್ತಿಯನ್ನು ಪಡೆಯಬಹುದು. ಮನಸ್ಸನ್ನು

ಹತೋಟಿಯಲ್ಲಿಡಬಹುದು. ಕುಂಡಿಲಿನಿ  ಮೊದಲಾದ  ಚಕ್ರಗಳನ್ನು ಉದ್ದೀಪನಗೊಳಿಸಿ ಉನ್ನತ ಸ್ಥಾನಕ್ಕೆ

ಎರಬಹುದೆನ್ನುತ್ತದೆ  ಯೋಗ.

ಇದನ್ನು  ಸಾಧಿಸಿದ್ಧರು ನಮ್ಮ ಪೂರ್ವಜರು. ಈಗಲೂ ಧ್ಯಾನದ ಮಹತ್ವ ಕಡಿಮೆಯಾಗಿಲ್ಲ. ತಪಸ್ಸು ಈ

ಧ್ಯಾನದ  ರೂಪವಷ್ಟೇ . ಇನ್ನೂ ಅಪರಿಚಿತವಾಗಿಯೇ ಉಳಿದ ಮನಸ್ಸಿನ ಅಂತರಾಳಕ್ಕೊಂದು ಪಯಣ

ಹೊರಡುವಿರಾದರೆ ಅದು ಧ್ಯಾನದ ಮೂಲಕವೇ.

ಧ್ಯಾನ ದಿನದ ಭಾಗವಾಗಿರಲಿ.

ಶನಿವಾರ, ಸೆಪ್ಟೆಂಬರ್ 1, 2012

ನನ್ನೊಳಗಿನ್ನೊಬ್ಬ

 ಇದು ಈ ದಿನದ ಕಥೆ.

ಇಂದು ಬೆಳಿಗ್ಗೆ  ನನಗೇಕೋ  ನಾನು ಎಂದಿನತಿಲ್ಲ ಎನಿಸತೊಡಗಿತು.  ಕನ್ನಡಿ ಎದುರು ನಿಂತೆ . ಚಹರೆಯಲ್ಲಿ

ಬದಲಾವಣೆ ಕಾಣಲಿಲ್ಲ. ಹೆಂಡತಿಯನ್ನು ಕೇಳಿದೆ .ದಿಟ್ಟಿಸಿ ನೋಡಿದವಳೇ  "ನಿಮಗೆಲ್ಲೋ  ಭ್ರಮೆ" ಎಂದು

ಬಿಟ್ಟಳು.  ಮತ್ತೆ ಪ್ರಶ್ನಿಸಲು  ಧೈರ್ಯ  ಬರಲಿಲ್ಲ.  ಮೊದಲೇ ನಡುವಯಸ್ಸು  ದಾಟಿದವನು 'ಅರಳು ಮರಳು'

ಎಂದುಕೊಂಡರೆ?   ಸರಿ ಮಗನನ್ನು ಕೇಳಿದೆ. "ಏನಿಲ್ಲ, ಎಲ್ಲ ಓಕೆ " ಎಂದ.  ಆದರೆ ನನ್ನ ಮನಸ್ಸು ಒಪ್ಪುತ್ತಿಲ್ಲ.

ಏನೋ ಬದಲಾವಣೆ ಆಗಿದೆ ಎನ್ನಿಸುತ್ತಲೇ ಇತ್ತು.   ಗೆಳೆಯರನ್ನು ಕೇಳಿಯೇ ಬಿಡೋಣ ಎಂದು ಕೇಳಿದೆ.

"ಸುಮ್ನೆ ಆರಾಮಿಲ್ದಿದ್ರೆ  ಮನೇಲೆ ಇರೋದು ಬಿಟ್ಟು ಹೊರಗೆಕೋ  ಬರೋಕೊದೆ" ಎಂದುಬಿಟ್ಟರು. ಇನ್ನು

ಕೇಳಿದ್ರೆ ಹುಚ್ಚ  ಎಂದರೆ ಕಷ್ಟ ಎಂದು ತೆಪ್ಪಗೆ ಬಂದೆ.   ಆದರೂ  ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು.

ಕೊನೆಯ ಪ್ರಯತ್ನವಾಗಿ  ಹಿರಿಯರೊಬ್ಬರನ್ನು  ಭೇಟಿಯಾಗಿ ಕೇಳಲು ನಿರ್ಧರಿಸಿದೆ.  ಅವರೋ ನನ್ನ ಮುಖ

ಕಾಣುತ್ತಲೇ "ಯಾಕೋ ನೀನು ಎಂದಿನಂತಿಲ್ಲ  ? ಮುಖ ಒಂತರಾ ಆಗಿದೆ, ಬಿಸ್ಲಲ್ಲಿ  ತಿರುಗ್ತಿದ್ರೆ ಇನ್ನೆನ್ನಾಗುತ್ತೆ"

ಎಂದರು.

ಅದನ್ನೇ ನಾನು ಅಂದುಕೊಳ್ತಾ ಇದ್ದೆ. ದಿನವೂ ನನ್ನೊಂದಿಗಿರುವ ನನ್ನೊಳಗಿನವ  ಇವನ್ನಲ್ಲ. ಅವನು ಇಂತಹ

ಅಸಂಬದ್ದ  ಕಥೆ ಹೇಳುತ್ತಲೇ ಇರಲ್ಲಿಲ್ಲ ಎಂದು!!!

ಸರಿ ತಾನೇ,

ಅವನು ನಾನಲ್ಲ.

ಶುಕ್ರವಾರ, ಆಗಸ್ಟ್ 31, 2012

ಮತ್ಸರ

ಮತ್ಸರವನ್ನು ನಾನು ಒಂದು ವಿಭಿನ್ನ ದೃಷ್ಟಿಯ  ಮೊಲಕ ನೋಡ ಬಯಸುತ್ತೇನೆ. ನಾವು ಮಾಡಲಸಾಧ್ಯವಾದುದ್ದನ್ನು

ಬೇರೊಬ್ಬರು ಮಾಡಿದಾಗ  ಉಂಟಾಗುವ ಕೀಳಿರಿಮೆಯೇ  ಮತ್ಸರವೆನ್ನಬಹುದು. ಅಂದರೆ ಪೈಪೋಟಿಯಲ್ಲಿ

ಅಸಾಧ್ಯವಾದಾಗ ಮೂಡುವ ಭಾವ. ಏಳಿಗೆಯನ್ನು ಸಹಿಸದ ಸ್ವಭಾವ.  ಇದು ವಯಕ್ತಿಕವಾದರೂ  ಪರಿಣಾಮ

ಘೋರವಾದೀತು . ಬೀಜಾಸುರನತೆ ಒಂದಕ್ಕೆ ಮತ್ತೊಂದು  ಜೋಡಿಸುತ್ತ  ನಾಶದತ್ತ ಮುನ್ನಡೆಸುತ್ತದೆ.

ಸ್ವನಾಶವಲ್ಲದೆ  ಪರ ನಾಶಕ್ಕೂ ಕಾರಣವಾಗುವ ಗುಣ. ಇದಕ್ಕೆ ಕಾರಣ ಸಹಿಷ್ಣುತೆಯ ಅಭಾವ. ನಾನು

ಮಾಡದ್ದನ್ನು ಬೇರೆಯವರೂ   ಮಾಡಬಾರದೆಂದ ಮನೋಸ್ಥಿತಿ.  ಕೆಲವೊಮ್ಮೆ ಇದು ಸಾಧಕವು ಆಗಬಹುದು.

ಮತ್ಸರದಲ್ಲೇ ಬೇರೆಯವರನ್ನು ಮೀರಿಸುವ ಛಲ ಮೂಡಿದರೆ ಹೆಚ್ಚಿನದನ್ನೇ ಸಾಧಿಸಲೂ ಬಹುದು.ಇಲ್ಲವೇ

ಬೇರೆಯವರನ್ನು ಹೇಗಾದರೂ  ನಾಶಮಾಡುವ ಬುದ್ಧಿ ಬಂದಿತೋ ಅದು ಸರ್ವನಾಶದ  ಮುನ್ನುಡಿ.

ಗುಣಕ್ಕಿಲ್ಲ  ಮತ್ಸರ.

ಮತ್ಸರದ ಬದಲು ಹೆಮ್ಮೆ ಬೆಳೆಸಿಕೊಳ್ಳೋಣ.


ನನ್ನ ಬ್ಲಾಗ್ ಪಟ್ಟಿ