ಮಂಗಳವಾರ, ಸೆಪ್ಟೆಂಬರ್ 25, 2012

ನನ್ನೆದೆಯಲ್ಲಿ ತಾವಿಲ್ಲ

ತಾವಿಲ್ಲ ನಿನಗೆ ನನ್ನೆದೆಯಲ್ಲಿ.

ಅಲ್ಲಿ ಇಲ್ಲಿ ಅಂಡೆಲದು
ಬೆಳಂಬೆಳಗು ಕುದ್ದು ಕೊಸರಾಡಿ
ಮತ್ತೆ ಉನ್ಮತ್ತನಂತೆ
ಹರಿದಾಡಿ ಬಂದರೆ,
ತಾವಿಲ್ಲ ನನ್ನದೆಯಲ್ಲಿ.

ಅಲ್ಲಿಯೇ ಮುಗಿದ ದಿನಗಳು
ಅಂದೇ ತೀರಿದ ಬದುಕು,
ಮತ್ತೆಂದು ಉರಿಯದ ಬೆಂಕಿ,
ನನ್ನೆದೆಯಿಂದ ನಿನ್ನೆದೆಗೆ ಸಾಗಿದ
ನೆನಪು,
ಬೇಕಿಲ್ಲ ನನಗೆ,
ನನ್ನದೆಯಲ್ಲಿ ತಾವಿಲ್ಲ.

ಮತ್ತೆ ಮರುಗದ ಕರುಳು,
ಉರಿದರೂ ತಣಿಯದ ದಾಹ,
ಒಂಟಿ ನಕ್ಷತ್ರದ ಬೆಳಕು,
ಬೇಡ ನನ್ನೆದೆಯಲ್ಲಿ ,
ತಾವಿಲ್ಲ ನಿನಗೆ.

ಯಾರ ಎದೆಯಲ್ಲಿ ಸುಖವಾಗಿದ್ದೆ?
ಯಾರ ಮಡಿಲಲ್ಲಿ ಮಲಗಿದ್ದೆ/
ಯಾರ ಭಾವ ನಿನ್ನ  ಸಾಕಿತು?
ಎಂದು ತೀರಿತು ದಿನ?
ಏನೂ ಬೇಕಿಲ್ಲ ನನಗೆ,
ನನ್ನೆದೆಯಲ್ಲಿ ತಾವಿಲ್ಲ.

ಕಣ್ಣಿಗೆ ಕಾಣದ ಲೋಕ,
ಕನಸ ಕಸಿಯುವ ಸುಖ ,
ಅತ್ತು ಸೊರಗಿದ ಗಂಟಲ
ಮಂದ್ರ ಗಾನ,
ಮುದಗೊಳಿಸದೆನ್ನ ,
ಹವಣಿಸದಿರು ಇನ್ನು
ತಾವಿಲ್ಲ ನನ್ನದೆಯಲ್ಲಿ.

ಕೂತುಬಿಡು  ಬೆಂಕಿಯಲ್ಲಿ,
ಮುಳಗಿಬಿಡು ನೀರಿನಲ್ಲಿ,
ಕತ್ತಿಡು   ಬೀಸುವ ಖಡ್ಗದಡಿ
ಮತ್ತೆಂದೂ  ಬರದಿರು
ನನ್ನೆದೆಯಲ್ಲಿ ತಾವಿಲ್ಲ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನನ್ನ ಬ್ಲಾಗ್ ಪಟ್ಟಿ